Wednesday, September 5, 2012
ನಿಮ್ಮ ಮೂತ್ರಪಿ೦ಡವನ್ನು ದಾನಮಾಡಿ.
ನಿಮ್ಮ ದೇಹದ ಅಂಗಗಳನ್ನು ಸ್ವರ್ಗಕ್ಕೆ ತೆಗೆದುಕೊಂಡು ಹೋಗಬೇಡಿ. ಅವುಗಳ ಅಗತ್ಯ ನಮಗೆ ಇಲ್ಲಿದೆ ಎಂದು ಸ್ವರ್ಗ ಅರಿತಿದೆ. ಮೂತ್ರಪಿಂಡ ದಾನದ ಕುರಿತು ಒಂದಿಷ್ಟು ಮಾಹಿತಿ...
ಆರೋಗ್ಯಕರ ಮೂತ್ರಪಿಂಡಗಳು ದೇಹದಲ್ಲಿ ರಕ್ತವನ್ನು ಶುದ್ಧಪಡಿಸುವುದಲ್ಲದೆ ಹೆಚ್ಚಿನ ದ್ರವ, ತ್ಯಾಜ್ಯ ಮತ್ತು ಖನಿಜಗಳನ್ನು ತೆಗೆದುಹಾಕುತ್ತವೆ. ಮೂಳೆಗಳನ್ನು ದೃಢವಾಗಿ ಮತ್ತು ರಕ್ತವನ್ನು ಆರೋಗ್ಯವಾಗಿ ಇರಿಸಲು ಅಗತ್ಯವಾದ ಹಾರ್ಮೊನ್‌ಗಳನ್ನು ಅವು ಬಿಡುಗಡೆ ಮಾಡುತ್ತವೆ. ಮೂತ್ರಪಿಂಡಗಳ ವೈಫಲ್ಯವಾದಾಗ ದೇಹದಲ್ಲಿ ಹಾನಿಕಾರಕ ತ್ಯಾಜ್ಯ ಸೇರಿಕೊಳ್ಳುತ್ತದೆ.
ರಕ್ತದೊತ್ತಡ ಹೆಚ್ಚುತ್ತದೆ. ಹೆಚ್ಚಿನ ದ್ರವ ದೇಹದೊಳಕ್ಕೆ ಉಳಿಯುತ್ತದೆ ಜೊತೆಗೆ ಸೂಕ್ತ ಪ್ರಮಾಣದ ಕೆಂಪು ರಕ್ತಕಣಗಳ ಉತ್ಪಾದನೆ ಆಗುವುದಿಲ್ಲ. ಹೀಗಾದಾಗ ವಿಫಲವಾಗಿರುವ ಮೂತ್ರಪಿಂಡಗಳ ಬದಲಾವಣೆಯ ಚಿಕಿತ್ಸೆ ಅಗತ್ಯವಾಗುತ್ತದೆ.
ಡಯಾಲಿಸಿಸ್ ಮತ್ತು ಮೂತ್ರಪಿಂಡ ಕಸಿ ಉನ್ನತ ಮಟ್ಟದ ಕಾಯಂ ಮೂತ್ರಪಿಂಡ ವೈಫಲ್ಯ (ಅಂತಿಮ ಹಂತದ ಮೂತ್ರಪಿಂಡ ರೋಗ-ckd)ದಲ್ಲಿ ಚಿಕಿತ್ಸೆಯ ಆಯ್ಕೆಗಳಾಗಿವೆ.
1954ರಲ್ಲಿ ಪ್ರಥಮ ಜೀವಂತ ದಾನಿಯಿಂದ ಪಡೆದ ಮೂತ್ರಪಿಂಡ ಕಸಿಯನ್ನು ಬೋಸ್ಟನ್ ಯುಎಸ್‌ಎನಲ್ಲಿ ನಡೆಸಲಾದಾಗಿನಿಂದ ಕಸಿ ಕಾರ‌್ಯವನ್ನು ಯಶಸ್ವಿಯಾಗಿಸಲು ಅಗತ್ಯವಾಗುವ ಬಹಳಷ್ಟು ಜ್ಞಾನವನ್ನು ಈಗ ಸಂಗ್ರಹಿಸಲಾಗಿದೆ.
ಯಶಸ್ವಿ ಮೂತ್ರಪಿಂಡ ಕಸಿ ಸಮನ್ವಯ ಸಾಂಘಿಕ ಕಾರ‌್ಯದ ಫಲವಾಗಿರುತ್ತದೆ. ಈ ತಂಡದಲ್ಲಿ ಮೂತ್ರಪಿಂಡ ತಜ್ಞರು, ಕಸಿ ಶಸ್ತ್ರಕ್ರಿಯಾ ತಜ್ಞರು, ಕಸಿ ಸಮನ್ವಯಕಾರರು, ಕಸಿ ತಜ್ಞ ದಾದಿಯರು, ಔಷಧ ತಜ್ಞರು, ಸಾಮಾಜಿಕ ಕಾರ‌್ಯಕರ್ತರು ಸೇರಿರುತ್ತಾರೆ. ಆದರೆ ಅತ್ಯಂತ ಪ್ರಮುಖ ಸದಸ್ಯರೆಂದರೆ ರೋಗಿ ಮತ್ತು ಅವರ ಕುಟುಂಬವಾಗಿರುತ್ತದೆ.
ದೇಹವನ್ನು ಸಂಪೂರ್ಣವಾಗಿ ಆರೋಗ್ಯವಾಗಿಸಲು ಒಂದು ಮೂತ್ರಪಿಂಡ ಸಾಕು ಎನ್ನುವ ವಾಸ್ತವಾಂಶ ಈಗಾಗಲೇ ನಿರೂಪಿತವಾಗಿದೆ. ಪ್ರಸ್ತುತ ಲಭ್ಯವಿರುವ ಸಾಕ್ಷಿಗಳ ಪ್ರಕಾರ ಮೂತ್ರಪಿಂಡ ದಾನದಿಂದ ವ್ಯಕ್ತಿಗೆ ಮೂತ್ರಪಿಂಡ ರೋಗ ಬರುವ ಅಪಾಯ ಹೆಚ್ಚುವುದಾಗಲಿ ಅಥವಾ ಜೀವನದ ಅವಧಿ ಕುಗ್ಗುವುದಾಗಲಿ ನಡೆಯುವುದಿಲ್ಲ ಎಂದು ತಿಳಿದುಬಂದಿದೆ.
ಅಥವಾ ಇತರೆ ಯಾವುದೇ ಪ್ರಮುಖ ಶಸ್ತ್ರಕ್ರಿಯೆಯಲ್ಲಿರುವ ರಕ್ತಸ್ರಾವ ಅಥವ ಸೋಂಕಿನಂತಹ ಆರೋಗ್ಯ ತೊಂದರೆಗಳು ಅಷ್ಟಾಗಿ ಇರುವುದಿಲ್ಲ. ಮೂತ್ರಪಿಂಡ ದಾನದಿಂದ ಉಂಟಾಗುವಂತಹ ಸಾವು ಅತ್ಯಂತ ವಿರಳ.
ಶಸ್ತ್ರಕ್ರಿಯೆಯಿಂದ ಚೇತರಿಸಿಕೊಂಡ ನಂತರ ದಾನಿಯು ತನ್ನ ಸಾಮಾನ್ಯ ಕೆಲಸ, ವಾಹನ ಚಾಲನೆ, ವ್ಯಾಯಾಮ, ಕ್ರೀಡೆಗಳಲ್ಲಿ ಭಾಗವಹಿಸುವುದು ಮುಂತಾದವುಗಳನ್ನು ಮಾಡಬಹುದು.
ಆದರೆ, ರಗ್ಬಿ, ಫುಟ್ಬಾಲ್‌ನಂತಹ ದೇಹಕ್ಕೆ ಘಾಸಿಯಾಗುವಂತಹ ಆಟಗಳನ್ನು ಶಿಫಾರಸ್ಸು ಮಾಡಲಾಗದು.
ದಾನಿಯು ಯಾವುದೇ ರೀತಿಯ ಉದ್ಯೋಗವನ್ನು ಮುಂದುವರಿಸಬಹುದಾಗಿದೆ. ದಾನಿಯಾಗಿರುವುದರಿಂದ ವ್ಯಕ್ತಿಗೆ ತಂದೆಯಾಗುವ ಸಾಮರ್ಥ್ಯದ ಮೇಲೆ ಯಾವುದೇ ಪರಿಣಾಮ ಉಂಟಾಗುವುದಿಲ್ಲ. ಆದರೆ ಮಹಿಳೆಯರು ಮೂತ್ರಪಿಂಡ ದಾನ ಮಾಡಿದ ನಂತರ ಗರ್ಭಿಣಿಯಾಗಲು ಕನಿಷ್ಠ ಆರು ತಿಂಗಳು ಕಾಯಬೇಕಾಗುತ್ತದೆ.
ಕಸಿ ಮಾಡುವ ಮೂತ್ರಪಿಂಡದ ಮೂಲಗಳು
ಕಸಿ ಮಾಡಲು ಬಳಸುವ ಮೂತ್ರಪಿಂಡಗಳನ್ನು ಆರೋಗ್ಯಯುತ ಜೀವಂತ ವ್ಯಕ್ತಿ (ಬದುಕಿರುವ ದಾನಿ) ಅಥವಾ ಇತ್ತೀಚೆಗೆ ಮೃತಪಟ್ಟ (ಮೃತದಾನಿ) ವ್ಯಕ್ತಿಯಿಂದ ಪಡೆಯಬಹುದಾಗಿದೆ.
ಸಾಮಾನ್ಯವಾಗಿ ಮೃತದಾನಿಗಿಂತ ಜೀವಂತ ದಾನಿ ಹೆಚ್ಚು ನೆಚ್ಚಿನ ಆಯ್ಕೆಯಾಗಿರುತ್ತದೆ.
ಏಕೆಂದರೆ
ದಾನ ಸ್ವೀಕರಿಸುವವರು ಮೃತ ದಾನಿಯ ಮೂತ್ರಪಿಂಡಕ್ಕಾಗಿ ದೀರ್ಘಕಾಲ ಕಾಯಬೇಕಾಗಿರುವುದಿಲ್ಲ.
ಮೂತ್ರಪಿಂಡವನ್ನು ಅತ್ಯಂತ ಶ್ರೇಷ್ಠ ಸ್ಥಿತಿಗಳಲ್ಲಿ ತೆಗೆಯಲಾಗುತ್ತದೆ.
ಕಸಿ ಮಾಡಿದ ತಕ್ಷಣವೇ ಮೂತ್ರಪಿಂಡ ಕಾರ‌್ಯಾರಂಭ ಮಾಡುತ್ತದೆ.
ಸ್ವೀಕರಿಸಿದವರ ದೇಹ ಮೂತ್ರಪಿಂಡವನ್ನು ತಿರಸ್ಕರಿಸುವ ಸಾಧ್ಯತೆ ಬಹಳ ಕಡಿಮೆ.
ಸ್ವೀಕರಿಸಿದವರಲ್ಲಿ ಮೂತ್ರಪಿಂಡ ಸುದೀರ್ಘ ಕಾಲ ಕಾರ‌್ಯನಿರ್ವಹಿಸುತ್ತದೆ.
ಜೀವಂತ ದಾನಿ
ಮೂತ್ರಪಿಂಡ ದಾನ ಕಡ್ಡಾಯವಾಗಿ ಸ್ವಯಂ ಇಚ್ಛೆಯಿಂದ ಮಾಡುವ ಕಾರ‌್ಯವಾಗಿರಬೇಕು. ಹತ್ತಿರದ ಕುಟುಂಬದ ಸದಸ್ಯರು ಮತ್ತು ಪತ್ನಿ, ತಂದೆ, ತಾಯಿ, ಸಹೋದರ, ಸಹೋದರಿ, ಮಗಳು, ತಾತ, ಅಜ್ಜಿ ಅಥವ ಪತಿ ಇವರು ಕಾನೂನಿನ ಪ್ರಕಾರ ಜೀವಂತದಾನಿಗಳಾಗಬಹುದಾಗಿದೆ. ರಕ್ತದ ಗುಂಪು ಹೊಂದಿಕೊಳ್ಳುವುದು ಕಡ್ಡಾಯವಾಗಿರುತ್ತದೆ.
ಮೃತ ದಾನಿ
ಮೃತ ದಾನಿಗಳಿಂದ ಗಮನಾರ್ಹ ಸಂಖ್ಯೆಯ ಮೂತ್ರಪಿಂಡಗಳನ್ನು ದಾನವಾಗಿ ಪಡೆಯಲಾಗುತ್ತದೆ. ತಮ್ಮ ಪ್ರೀತಿಪಾತ್ರರ ಆಕಾಂಕ್ಷೆಗಳ ಬಗ್ಗೆ ಕುಟುಂಬದ ಸದಸ್ಯರಿಗೆ ತಿಳಿದಿರದ ಕಾರಣ ಅನೇಕ ಮೂತ್ರಪಿಂಡಗಳು ಬಳಕೆಗೆ ಬರುವುದಿಲ್ಲ.
ಅಂಗಗಳನ್ನು ದಾನ ನೀಡುವ ಆಸೆ ಹೊಂದಿರುವ ವ್ಯಕ್ತಿಗಳು ಇದರ ಬಗ್ಗೆ ತಮ್ಮ ಕುಟುಂಬದವರೊಂದಿಗೆ ಮಾತುಕತೆ ನಡೆಸಬೇಕು. ಝೆಡ್‌ಸಿಸಿಕೆ, ಮೋಹನ್ ಫೌಂಡೇಷನ್‌ನಂತಹ ಹಲವಾರು ಸಂಸ್ಥೆಗಳು ಅಂಗಗಳನ್ನು ದಾನ ಮಾಡಲು ಡೋನರ್ ಕಾರ್ಡ್‌ಗಳನ್ನು ಸಾವಿನ ನಂತರ ತಮ್ಮ ಅಂಗಗಳನ್ನು ಜೀವ ಉಳಿಸುವ ಕೊಡುಗೆಗಳಾಗಿ ನೀಡಲು ಇಚ್ಛಿಸುವ ಜನರಿಗೆ ನೀಡುತ್ತವೆ.
ಜೀವಂತ ದಾನಿಯ ಪರೀಕ್ಷೆ
ಎಲ್ಲಾ ಸಂಭಾವ್ಯ ದಾನಿಗಳು ವೈದ್ಯಕೀಯ ಇತಿಹಾಸ ಪರೀಕ್ಷೆ ಮತ್ತು ದೈಹಿಕ ತಪಾಸಣೆಗಳಿಗೆ ಒಳಗಾಗಬೇಕು. ಯಾವುದೇ ಆತಂಕಕಾರಿ ಆರೋಗ್ಯ ತೊಂದರೆಗಳು ಇಲ್ಲವೆಂಬುದನ್ನು ಖಾತ್ರಿ ಮಾಡಿಕೊಳ್ಳಲಾಗುತ್ತದೆ.
ಹಲವಾರು ಪ್ರಯೋಗಾಲಯದ ಪರೀಕ್ಷೆಗಳು, ಎಕ್ಸರೆಗಳು, ಇಸಿಜಿಯನ್ನು ಮೂತ್ರಪಿಂಡದ ಕಾರ್ಯ, ಹೆಪಟೈಟೀಸ್, ಹೃದಯ ರೋಗಗಳು, ಮಧುಮೇಹ ಹಾಗೂ ಈ ಹಿಂದೆ ವೈರಲ್ ಸೋಂಕಿಗಾಗಿ ನಡೆಸಲಾಗುತ್ತದೆ.
ಮೂತ್ರಪಿಂಡಗಳಿಗಾಗಿ ಅಲ್ಟ್ರಾಸೋನೊಗ್ರಾಮ್ ಮತ್ತು ಡಿಟಿಪಿಎ ಸ್ಕ್ಯಾನ್‌ಗಳನ್ನು ನಡೆಸಿ ದಾನಿಯ ಎರಡು ಮೂತ್ರಪಿಂಡಗಳು ಸಾಮಾನ್ಯವಾಗಿ ಕೆಲಸ ಮಾಡುತ್ತಿವೆಯೇ ಎಂಬುದರ ಖಾತ್ರಿ ಮಾಡಿಕೊಳ್ಳಲಾಗುತ್ತದೆ.
ಪ್ಯಾಪ್ ಸ್ಮಿಯರ್, ಮ್ಯೋಮೊಗ್ರಾಮ್, ಕೋಲೊನೊಸ್ಕೋಪಿ ಮುಂತಾದವುಗಳನ್ನು ನಡೆಸಿ ಯಾವುದೇ ದಾನಿ ಆರೋಗ್ಯಕರವಾಗಿರುವುದರ ಖಾತ್ರಿ ಮಾಡಿಕೊಳ್ಳಲಾಗುತ್ತದೆ. ಎಚ್‌ಎಲ್‌ಎ ಪರೀಕ್ಷೆ ಮತ್ತು ಕ್ರಾಸ್ ಮ್ಯೋಚ್ ಪರೀಕ್ಷೆಯನ್ನು ಎಲ್ಲಾ ರೋಗಿಗಳ ಮೇಲೆ ನಡೆಸಲಾಗುತ್ತದೆ.
ಅಂತಿಮ ಹೆಜ್ಜೆಯಾಗಿ ಸಿಟಿ ಏಂಜಿಯೋಗ್ರಾಮ್‌ನ್ನು ನಡೆಸಲಾಗುತ್ತದೆ. ಇಲ್ಲಿ ಕಾಂಟ್ರ್ಯಾಸ್ಟ್‌ಅನ್ನು ರಕ್ತನಾಳದ ಮೂಲಕ ಸೇರಿಸಲಾಗುತ್ತದೆ. ಈ ಕಾಂಟ್ರ್ಯಾಸ್ಟ್ ಮೂತ್ರಪಿಂಡ ಮತ್ತು ಮೂತ್ರನಾಳಗಳ ಮೂಲಕ ಹರಿಯುವಾಗ ಸಿಟಿ ಸ್ಕ್ಯಾನ್ ನಡೆಸಲಾಗುತ್ತದೆ.
ಇದು ಮೂತ್ರಪಿಂಡಗಳು, ಮೂತ್ರನಾಳಗಳು ಸಾಮಾನ್ಯ ರೀತಿಯಲ್ಲಿವೆ ಎಂಬುದನ್ನು ನಿರೂಪಿಸುತ್ತದೆ. ಶಸ್ತ್ರಕ್ರಿಯಾ ತಜ್ಞರೊಂದಿಗೆ ಭೇಟಿಯಲ್ಲಿ ಮಾನಸಿಕವಾಗಿ ಸಂಪೂರ್ಣ ಮೌಲ್ಯೀಕರಣ ನಡೆಸಲಾಗುತ್ತದೆ.
ಎಲ್ಲಾ ಫಲಿತಾಂಶಗಳು ಲಭ್ಯವಾದ ನಂತರ ಬಹು ವಿಭಾಗೀಯ ತಂಡ ಇವುಗಳನ್ನು ಪರಿಷ್ಕರಿಸಿ ದಾನ ಮತ್ತು ಕಸಿ ಪ್ರಕ್ರಿಯೆ ಕೈಗೊಳ್ಳುವುದು ಸುರಕ್ಷಿತವೇ ಎಂಬುದನ್ನು ನಿರ್ಧರಿಸುತ್ತದೆ. ಭಾರತದಲ್ಲಿ ರಾಜ್ಯದೊಳಗೆ ಇದಕ್ಕಾಗಿ ನೇಮಕವಾಗಿರುವ ಸಮಿತಿಗೆ ಅರ್ಜಿಯನ್ನು ಕಳುಹಿಸಬೇಕು.
ಸಮಿತಿ ದಾನಿಯನ್ನು ಪರೀಕ್ಷಿಸಿ ಸಂದರ್ಶನದ ನಂತರ ಕಸಿ ಶಸ್ತ್ರಚಿಕಿತ್ಸೆಗೆ ಅಧಿಕೃತ ಒಪ್ಪಿಗೆ ನೀಡುತ್ತದೆ. ಅಧಿಕೃತವಾಗಿ ಒಪ್ಪಿಗೆಯ ಪತ್ರ ಸ್ವೀಕರಿಸಿದ ನಂತರ ಆಸ್ಪತ್ರೆ ಕಸಿ ಕಾರ‌್ಯವನ್ನು ಕೈಗೊಳ್ಳುತ್ತದೆ.
ದಾನಿಯ ಶಸ್ತ್ರಚಿಕಿತ್ಸೆ
ದಾನಿಯ ಶಸ್ತ್ರಚಿಕಿತ್ಸೆಯು ತೆರೆದ ಶಸ್ತ್ರಚಿಕಿತ್ಸೆ ಅಥವ ಉದರದರ್ಶಕ ಶಸ್ತ್ರಚಿಕಿತ್ಸೆ ಆಗಿರಬಹುದು.
ತೆರೆದ ಶಸ್ತ್ರಚಿಕಿತ್ಸೆ: ಈ ಶಸ್ತ್ರಚಿಕಿತ್ಸೆಯಲ್ಲಿ ಹೊಟ್ಟೆಯ ಪಕ್ಕದಲ್ಲಿ 5ರಿಂದ 7 ಇಂಚು ಸೀಳುಗಾಯ ಮಾಡಿ 12ನೇ ಎದೆ ಮೂಳೆಯ ತುದಿಯನ್ನು ತೆಗೆದು ಮೂರು ಗಂಟೆಗಳ ಶಸ್ತ್ರಚಿಕಿತ್ಸೆ ನಡೆಸಿ ಮೂತ್ರಪಿಂಡವನ್ನು ತೆಗೆಯಲಾಗುತ್ತದೆ.
ದಾನಿಗಳಿಗೆ ಬಹಳ ದೃಢವಾದ ನೋವು ನಿವಾರಕ ಔಷಧಿಗಳನ್ನು ಶಸ್ತ್ರಕ್ರಿಯೆ ನಂತರ ನೀಡಲಾಗುತ್ತದೆ. ಆಸ್ಪತ್ರೆಯಲ್ಲಿ ಚೇತರಿಕೆಯ ಅವಧಿ 5ರಿಂದ 7 ದಿನಗಳು ಮತ್ತು 8-12 ವಾರಗಳ ಕಾಲ ಕೆಲಸದಿಂದ ದೂರವಿರಬೇಕಾಗುತ್ತದೆ.
ಉದರದರ್ಶಕ ಶಸ್ತ್ರಚಿಕಿತ್ಸೆ: ಉದರದರ್ಶಕ ಶಸ್ತ್ರಚಿಕಿತ್ಸೆಯಲ್ಲಿ ಅತ್ಯಂತ ಸಣ್ಣ ಸೀಳುಗಾಯಗಳನ್ನುಂಟು ಮಾಡಲಾಗುತ್ತದೆ. ಈ ರೀತಿಯ ಶಸ್ತ್ರಚಿಕಿತ್ಸೆ ಅದ್ಭುತವಾದ ರೀತಿಯಲ್ಲಿ ದಾನಿಗಳು ಚೇತರಿಸಿಕೊಳ್ಳಲು ನೆರವಾಗುತ್ತದೆ.
ಈ ಶಸ್ತ್ರಚಿಕಿತ್ಸೆ ಎರಡರಿಂದ 3 ಗಂಟೆಗಳ ಅವಧಿ ಹಿಡಿಯುತ್ತದೆ. ಚೇತರಿಸಿಕೊಳ್ಳಲು 1ರಿಂದ 3 ದಿನಗಳು ಬೇಕಾಗುತ್ತದೆ. ದಾನಿಗಳು ಸಾಮಾನ್ಯವಾಗಿ 2ರಿಂದ 3 ವಾರಗಳಲ್ಲಿ ತಮ್ಮ ಕೆಲಸಕ್ಕೆ ಹಿಂತಿರುಗಬಹುದಾಗಿರುತ್ತದೆ.
ಆಸ್ಪತ್ರೆಯಿಂದ ಬಿಡುಗಡೆಯಾದ ನಂತರ ದಾನಿಗಳನ್ನು ಮೂತ್ರಪಿಂಡ ತಜ್ಞರು ನಿಗದಿತ ಅವಧಿಯಲ್ಲಿ ತಪಾಸಣೆಗಳಿಗಾಗಿ ಕರೆಯುತ್ತಾರೆ. ಈ ಸಂದರ್ಶನದ ಅವಧಿಗಳಲ್ಲಿ ರಕ್ತದೊತ್ತಡ, ಮೂತ್ರಪಿಂಡ ಕಾರ‌್ಯಗಳನ್ನು ಪರೀಕ್ಷಿಸಿ ಉತ್ತಮ ಆರೋಗ್ಯದ ಖಾತ್ರಿ ಮಾಡಿಕೊಳ್ಳಲಾಗುತ್ತದೆ.
ಈ ಲೇಖನ ಮತ್ತೊಂದು ಜೀವಕ್ಕಾಗಿ ಸದ್ದಿಲ್ಲದೆ ಜೀವನವನ್ನು ದಾನವಾಗಿ ನೀಡಿದ ತೆರೆಮರೆಯ ಹೀರೊ(ಅಂಗದಾನಿಗಳು)ಗಳಿಗೆ ಸಲ್ಲಿಸಿರುವ ಗೌರವವಾಗಿದೆ.
Wednesday, April 18, 2012
ಹೃದ್ರೋಗದ ಮೂಲ ಕಿಡ್ನಿಯಲ್ಲಿದೆ
ಹೃದ್ರೋಗದ ಮೂಲ ಕಿಡ್ನಿಯಲ್ಲಿದೆ
!
ಮಧುಮೇಹದಿಂದ ಮೂತ್ರಪಿಂಡ ಕಾಯಿಲೆ ಬಂದರೆ ಅದು ಹೃದಯ ಮತ್ತು ಮೆದುಳಿಗೆ ತುಂಬಾ ಅಪಾಯಕಾರಿಯಾಗುತ್ತದೆ. ಅಧ್ಯಯನವೊಂದರ ಪ್ರಕಾರ ಶೇ. 98 ತೀವ್ರತರರ ಕಿಡ್ನಿ ಕಾಯಿಲೆಯಿಂದ ಬಳಲುತ್ತಿರುವವರು ಕೊನೆಕೊನೆಗೆ ಹೃದಯ ಸಂಬಂಧಿ ಕಾಯಿಲೆಗಳಿಗೆ ಹತ್ತಿರವಾಗುತ್ತಾರೆ ಎಂಬುದು ದೃಢಪಟ್ಟಿದೆ.
ಅಂದರೆ ಮಧುಮೇಹ ನೇರವಾಗಿ ರಕ್ತನಾಳಗಳ ಮೇಲೆ ಪರಿಣಾಮ ಬೀರುತ್ತದೆ. ಅದು ಕಿಡ್ನಿ ವೈಫಲ್ಯಕ್ಕೆ ದಾರಿಯಾಗುತ್ತದೆ. ಅದಕ್ಕೂ ಮುನ್ನ ಹೃದಯ ಮತ್ತು ಮೆದುಳಿಮವರೆಗೂ ಹಾದುಹೋಗುವ ರಕ್ತನಾಳಗಳಿಗೆ ಧಕ್ಕೆ ತರುತ್ತದೆ. ಹೀಗೆ ಒಂದಕ್ಕೊಂದು ಅನಪೇಕ್ಷೀಯ ಸಂಬಂಧ ಹೊಂದಿವೆ. ಅಂದರೆ ಕಿಡ್ನಿ ವೈಫಲ್ಯಕ್ಕೊಳಗಾದರೆ ಹೃದ್ರೋಗ ಗ್ಯಾರಂಟಿ ಅಥವಾ ಹೃದ್ರೋಗ ಬಂದರೆ ಕಿಡ್ನಿ ವೈಫಲ್ಯ ಉಚಿತ ಎನ್ನುವಂತಾಗಿದೆ.
ಇನ್ನೂ ಆತಂಕಕಾರಿ ಎಂದರೆ ಕಿಡ್ನಿ ವೈಫಲ್ಯಕ್ಕೀಡಾಗುತ್ತಿದ್ದಂತೆ ವಿಷಕಾರಿ ತ್ಯಾಜ್ಯಗಳು ಶೇಖರಣೆಯಾಗುತ್ತಾ ಸಾಗುತ್ತದೆ. ಕೊನೆಗೆ ಅದು ಹೃದಯದ ಕಾರ್ಯವೈಖರಿ ಮೇಲೆ ಅಡ್ಡಪರಿಣಾಮ ಬೀರುತ್ತದೆ. ಆದ್ದರಿಂದ ಹೃದ್ರೋಗ ಚಿಕಿತ್ಸೆ ಅಥವಾ ಕಿಡ್ನಿ ಚಿಕಿತ್ಸೆ ಎಂದು ಪ್ರತ್ಯೇಕಗೊಳಿಸದೆ ಎರಡರತ್ತಲೂ ಗಮನಹರಿಸುವುದು ಕ್ಷೇಮ. ಅದಕ್ಕೇ ಹೇಳಿದ್ದು ಕಿಡ್ನಿ ಸಮಸ್ಯೆ ಕಾಣಿಸಿಕೊಂಡರೆ ಒಮ್ಮೆ ನಿಮ್ಮ ಹೃದಯವನ್ನು ಮುಟ್ಟಿನೋಡಿಕೊಳ್ಳಿ.
ಪ್ರತಿ ವರ್ಷ ಮಾರ್ಚ್ 10ರಂದು ವಿಶ್ವ ಕಿಡ್ನಿ ದಿನ ಆಚರಿಸಲಾಗುತ್ತದೆ. ಕನಿಷ್ಠ ಈ ಸಂದರ್ಭದಲ್ಲಾದರೂ ಜನ ತಮ್ಮ ಕಿಡ್ನಿಗಳ ಕಡೆ ನೋಡಿಕೊಳ್ಳಲಿ ಎಂದು.
Tuesday, April 17, 2012
ಮೂತ್ರಪಿ೦ಡದ ಅಥವಾ ಕಿಡ್ನಿ ಸಮಸ್ಯೆಯಿದ್ದರೆ ದಾಳಿಂಬೆ ಜ್ಯೂಸ್ ಕುಡಿಯಿರಿ
ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದವರು ದಾಳಿಂಬೆ ಜ್ಯೂಸ್ ಸೇವಿಸುವುದರಿಂದ ಹೆಚ್ಚಿನ ಉಪಯೋಗ ಪಡೆಯಬಹುದು ಎಂದು ಅಧ್ಯಯನವೊಂದು ತಿಳಿಸಿದೆ. ಅಷ್ಟೇ ಅಲ್ಲ, ದಾಳಿಂಬೆ ಜ್ಯೂಸ್ ನಿಂದ ದೇಹದಲ್ಲಿನ ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನೂ ತಗ್ಗಿಸಬಹುದು ಎಂದು ತಿಳಿಸಿಕೊಟ್ಟಿದೆ.
ದಾಳಿಂಬೆ ಜ್ಯೂಸ್ ನಲ್ಲಿ ದೇಹಕ್ಕೆ ಅತ್ಯವಶ್ಯಕವಾದ ಆಂಟಿಯಾಕ್ಸಿಡಂಟ್ ಇರುವುದು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವ ರೋಗಿಗಳಿಗೆ ಹೆಚ್ಚು ಆರೋಗ್ಯವನ್ನು ನೀಡುತ್ತದೆ ಎನ್ನಲಾಗಿದೆ.
ಇಸ್ರೇಲ್ ನ ವೆಸ್ಟರ್ನ್ ಮೆಡಿಕಲ್ ಸೆಂಟರ್ ನಡೆಸಿದ ಸಂಶೋಧನೆಯಿಂದ ಈ ಅಂಶ ತಿಳಿದುಬಂದಿದೆ. ಕಿಡ್ನಿ ಸಮಸ್ಯೆಯ ರೋಗಿಗಳಲ್ಲಿ ಹೃದಯದ ತೊಂದರೆಗೆ ಎಡೆಮಾಡಿಕೊಡುವ ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ಅಂಶದ ಮೇಲೆ ದಾಳಿಂಬೆ ಜ್ಯೂಸ್ ಸೇವನೆ ಯಾವ ರೀತಿ ದೀರ್ಘಕಾಲಿಕ ಪರಿಣಾಮ ಬೀರುತ್ತದೆ ಎಂಬುದಾಗಿ ಸಂಶೊಧನೆ ನಡೆಸಿದಾಗ ಈ ಫಲಿತಾಂಶ ದೊರೆತಿದೆ.
ಸಂಶೋಧನೆಯಲ್ಲಿ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ 101 ರೋಗಿಗಳನ್ನು ಒಳಪಡಿಸಿ, ವಾರದಲ್ಲಿ ಮೂರು ಬಾರಿ 3 1/2 ಔನ್ಸ್ ದಾಳಿಂಬೆ ಜ್ಯೂಸ್ ಸೇವಿಸಲು ಹೇಳಲಾಯಿತು.
ಒಂದು ವರ್ಷದ ನಂತರ ಸಂಶೋಧನೆಗೆ ಒಳಪಡಿಸಿದ ರೋಗಿಗಳ ಆರೋಗ್ಯದಲ್ಲಿ ಸಾಕಷ್ಟು ಸುಧಾರಣೆ ಕಂಡುಬಂದಿದ್ದಾಗಿ ಸಂಶೋಧನೆ ತಿಳಿಸಿದೆ. ಅಷ್ಟೇ ಅಲ್ಲ, ದಾಳಿಂಬೆ ಜ್ಯೂಸ್ ಸೇವನೆಯಿಂದ ರೋಗಿಗಳಲ್ಲಿ ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ಆರೋಗ್ಯಕರವಾಗಿದ್ದು, ಹೃದಯಕ್ಕೆ ರಕ್ತ ಸಂಚಲನ ಮಾಡುವ ನಾಳಗಳಲ್ಲಿ ರಕ್ತ ಹೆಪ್ಪುಗಟ್ಟುವಿಕೆ ತಡೆದು ಹೃದಯ ಸ್ತಂಭನವಾಗುವ ಸಾಧ್ಯತೆಯನ್ನೂ ನಿವಾರಿಸಿರುವುದಾಗಿ ಕಂಡುಬಂದಿದೆ.
ಮೂತ್ರಪಿ೦ಡದ ಅಥವಾ ಕಿಡ್ನಿ ಸಮಸ್ಯೆಯಿದ್ದರೆ ಈ ಆಹಾರ ಮುಟ್ಟಲೇಬೇಡಿ
ಮೂತ್ರಪಿ೦ಡದ ಅಥವಾ ಕಿಡ್ನಿ ಸಮಸ್ಯೆಯಿದ್ದರೆ ಈ ಆಹಾರ ಮುಟ್ಟಲೇಬೇಡಿ
ರೋಗ ಬಂದ ಮೇಲೆ ಅದನ್ನು ನಿವಾರಿಸಲು ಪರಿತಪಿಸುವುದಕ್ಕಿಂತ ಮುನ್ನವೇ ಪರಿಹರಿಸುವುದು ಲೇಸು. ಆದರೆ ಅಸಮರ್ಪಕ ಜೀವನಶೈಲಿ ಕಿಡ್ನಿ ಆರೋಗ್ಯವನ್ನು ಹಾಳುಗೆಡಹಿದ್ದರೆ ಇನ್ನಾದರೂ ಎಚ್ಚರವಹಿಸಲೇಬೇಕು. ಇಲ್ಲದಿದ್ದರೆ ಸಮಸ್ಯೆ ಇನ್ನೂ ಮಾರಕವಾಗಬಹುದು.
ಸಮಸ್ಯೆ ದ್ವಿಗುಣಗೊಳ್ಳುವುದನ್ನು ತಪ್ಪಿಸಲು ಇರುವ ಮಾರ್ಗವೆಂದರೆ ಕಿಡ್ನಿಗೆ ಮಾರಕವಾಗಬಹುದಾದ ಕೆಲವು ಆಹಾರಗಳ ಸೇವನೆಯನ್ನು ತ್ಯಜಿಸುವುದು. ಕಿಡ್ನಿ ಸಮಸ್ಯೆಯಿದ್ದವರು ನಿರ್ದಿಷ್ಟ ಆಹಾರವನ್ನು ದೂರವಿಡಲೇಬೇಕು. ಅಂತಹ ಆಹಾರಗಳು ಯಾವುವೆಂದು ಇಲ್ಲಿ ತಿಳಿದುಕೊಳ್ಳಿ.
ಕಿಡ್ನಿ ಸಮಸ್ಯೆಯಿದ್ದವರು ದೂರವಿಡಬೇಕಾದ ಆಹಾರ:
1. ಮಾಂಸಾಹಾರ ಸೇವನೆ: ಕಿಡ್ನಿ ತೊಂದರೆಗೆ ಒಳಗಾಗಿದೆ ಎಂದು ತಿಳಿಯುತ್ತಿದ್ದಂತೆ ಅಂತಹವರಿಗೆ ಮೊದಲು ಮಾಂಸಾಹಾರ ನಿಲ್ಲಿಸುವಂತೆ ಸಲಹೆ ನೀಡಲಾಗುತ್ತೆ. ಮಾಂಸ ಮತ್ತು ಮೀನಿನಲ್ಲಿ ಫಾಸ್ಪರಸ್ ಇರುವುದರಿಂದ ಕಿಡ್ನಿಗೆ ಒಳ್ಳೆಯದಲ್ಲ. ಕಿಡ್ನಿ ಮೊದಲೇ ಹಾಳಾಗಿರುವುದರಿಂದ ಇದರ ಸೇವನೆ ಇನ್ನಷ್ಟು ಆರೋಗ್ಯವನ್ನು ಕೆಡಿಸುತ್ತದೆ. ಇದು ರಕ್ತದಲ್ಲಿ ಯುರಿಕ್ ಆಸಿಡ್ ಹೆಚ್ಚಾಗಿಸಿ ಇದರಿಂದ ಕೀಲು ನೋವನ್ನೂ ತರುತ್ತದೆ.
2. ಟೀ, ಕಾಫಿ, ದ್ರಾಕ್ಷಿ: ಆಕ್ಸಾಲಿಕ್ ಆಸಿಡ್ ಹೊಂದಿರುವ ಆಹಾರ ಕಿಡ್ನಿ ಸ್ವಾಸ್ಥ್ಯಕ್ಕೆ ಒಳ್ಳೆಯದಲ್ಲ. ಆಕ್ಸಲೇಟ್ ಎಂಬ ಅಂಶ ಕಿಡ್ನಿಯ ಆರೋಗ್ಯವನ್ನು ಕೆಡಿಸುತ್ತದೆ. ಟೀ, ಕಾಫಿ, ದ್ರಾಕ್ಷಿ, ಕಿತ್ತಳೆ ಮುಂತಾದ ಆಹಾರಗಳು ಆಕ್ಸಲೇಟ್ ಉತ್ಪತ್ತಿ ಮಾಡುತ್ತದೆ. ಈ ಆಹಾರಗಳು ಕಿಡ್ನಿಯಲ್ಲಿ ಕಲ್ಲನ್ನು ತರುವುದರಿಂದ ಇವುಗಳಿಂದ ದೂರವುಳಿಯುವುದು ಒಳ್ಳೆಯದು.
3. ಉಪ್ಪು, ಉಪ್ಪಿನ ಕಾಯಿ: ಕಿಡ್ನಿ ತೊಂದರೆಯಿದ್ದವರು ಹೆಚ್ಚು ಉಪ್ಪನ್ನು ತಿನ್ನಬಾರದು. ಕಿಡ್ನಿ ಅಸಮರ್ಪಕ ಕಾರ್ಯನಿರ್ವಹಣೆಗೂ ಮತ್ತು ರಕ್ತದೊತ್ತಡಕ್ಕೂ ನಡುವೆ ಸಂಬಂಧವಿದೆ. ಆದ್ದರಿಂದ ಉಪ್ಪನ್ನು ಆದಷ್ಟು ಕಡಿಮೆ ತಿನ್ನಬೇಕು. ಶೇಖರಿಸಿಟ್ಟ ಆಹಾರ ಮತ್ತು ಉಪ್ಪಿನಕಾಯಿಯನ್ನೂ ತಿನ್ನಬಾರದು. ಏಕೆಂದರೆ ಶೇಖರಿಸಿಟ್ಟ ಆಹಾರದಲ್ಲಿ ಕಿಡ್ನಿಗೆ ಮಾರಕವಾಗುವ ಸೋಡಿಯಂ ಅಧಿಕ ಪ್ರಮಾಣದಲ್ಲಿರುತ್ತದೆ.
* ಹಣ್ಣುಗಳು: ಕಿಡ್ನಿ ಸ್ವಾಸ್ಥ್ಯ ಹದಗೆಟ್ಟಿದ್ದರೆ ಪೊಟಾಶಿಯಂ ಹೆಚ್ಚಿರುವ ಆಹಾರ ಒಳ್ಳೆಯದಲ್ಲ. ಹಣ್ಣುಗಳನ್ನು ಮತ್ತು ಕೆಲವು ಹಸಿರು ಎಲೆಗಳುಳ್ಳ ತರಕಾರಿಗಳನ್ನು ಇಂತಹವರು ತಿನ್ನಬಾರದು. ಪೊಟಾಶಿಯಂ ಹೆಚ್ಚಿರುವ ಆಹಾರ ಸೇವಿಸಿದರೆ ದೇಹದಲ್ಲಿ ನೀರು ಅಧಿಕ ಮಟ್ಟದಲ್ಲಿ ಸೇರಿಕೊಂಡು ತೊಂದರೆಯುಂಟಾಗುತ್ತದೆ.
* ಚಾಕಲೇಟ್, ಹಾಲು: ನೀವು ಚಾಕಲೇಟ್ ಪ್ರಿಯರಾಗಿದ್ದರೆ ನಿಮಗೆ ಕಹಿ ಸುದ್ದಿ. ಎಲ್ಲಾ ಕೊಕೊ ಉತ್ಪನ್ನಗಳು, ಚಾಕಲೇಟ್, ಹಾಲು, ಹಾಲಿನ ಉತ್ಪನ್ನ, ಬೀಜ, ಡ್ರೈ ಫ್ರೂಟ್ಸ್ ಇವೆಲ್ಲವೂ ಕಿಡ್ನಿಗೆ ತೊಂದರೆಯುಂಟು ಮಾಡುತ್ತದೆ. ಕಿಡ್ನಿಯಲ್ಲಿ ಹೆಚ್ಚು ಫಾಸ್ಪರಸ್ ಅಂಶ ಸೇರಿಕೊಂಡರೆ ಕ್ಯಾಲ್ಸಿಯಂ ಹೀರಿಕೊಳ್ಳುವ ಸಾಮರ್ಥ್ಯವನ್ನು ಕುಗ್ಗಿಸುತ್ತದೆ.
ಮೂತ್ರಪಿ೦ಡದ ಅಥವಾ ಕಿಡ್ನಿ ಆರೋಗ್ಯಕ್ಕೆ ಎಷ್ಟು ನೀರು ಕುಡಿಯಬೇಕು?
ಮೂತ್ರಪಿ೦ಡದ ಅಥವಾ
ಕಿಡ್ನಿ ಆರೋಗ್ಯಕ್ಕೆ ಎಷ್ಟು ನೀರು ಕುಡಿಯಬೇಕು?
ಕಿಡ್ನಿ ಸಮಸ್ಯೆಗೆ ನೀರಿನ ಸೇವನೆ ಸುಲಭ ಚಿಕಿತ್ಸೆ ಎನ್ನಲಾಗಿದೆ. ಮೂತ್ರನಾಳಕ್ಕೆ ಸಂಬಂಧಿಸಿದ ಸೋಂಕಿಗೂ ನೀರು ಉತ್ತಮ ಪರಿಹಾರ. ಆದರೆ ಕಿಡ್ನಿ ಆರೋಗ್ಯವಾಗಿರಬೇಕಾದರೆ ನೀರಿನ ಅವಶ್ಯಕತೆ ಎಷ್ಟಿದೆ ಎಂದು ತಿಳಿಯಲು ಕೆಲವು ಅಂಶಗಳನ್ನು ನೀಡಲಾಗಿದೆ.
ಕಿಡ್ನಿ ಆರೋಗ್ಯದಲ್ಲಿ ನೀರಿನ ಪಾತ್ರ ಏನು?
* ಕಿಡ್ನಿಗೆ ನೀರು ಎಷ್ಟಿರಬೇಕು?: ಸಾಮಾನ್ಯವಾಗಿ 8ರಿಂದ 10 ಗ್ಲಾಸ್ ನೀರು ದೇಹಕ್ಕೆ ಅವಶ್ಯಕ. ತುಂಬಾ ಹೆಚ್ಚು ನೀರು ಕುಡಿಯುವುದರಿಂದ ಕಿಡ್ನಿಯ ರೆನಲ್ ಕಾರ್ಯದ ಮೇಲೆ ಪರಿಣಾಮ ಬೀರಬಹುದು. ಆರ್ಗಿನೈನ್ ವ್ಯಾಸೊಪ್ರೆಸಿನ್ ಹಾರ್ಮೋನ್ ನೀರಿನಂಶ ನಿಯಂತ್ರಿಸಿ ರೆನಲ್ ಕಾರ್ಯ ನೋಡಿಕೊಳ್ಳುತ್ತದೆ. ನೀರನ್ನು ಅತಿಯಾಗಿ ಕುಡಿದರೆ ಇದೂ ಕೂಡ ತೊಂದರೆಗೀಡಾಗಬಹುದು.
* ಕಿಡ್ನಿ ಮೇಲೆ ನೀರಿನ ಪರಿಣಾಮ: ತುಂಬಾ ಕಡಿಮೆ ಮಟ್ಟದಲ್ಲಿ ನೀರು ಕುಡಿದರೂ ತೊಂದರೆ ಅನುಭವಿಸಬೇಕಾಗುತ್ತದೆ. ಇದು ರೆನಲ್ ಲಿಥಿಯಾಸಿಸ್ ಮತ್ತು ಮೂತ್ರನಾಳದ ಸೋಂಕಿಗೆ ಕಾರಣವಾಗುತ್ತದೆ.
* ಕಿಡ್ನಿ ಕಲ್ಲು ಹೇಗೆ ಬರುತ್ತೆ?: ಸ್ವಲ್ಪವೇ ನೀರನ್ನು ಕುಡಿಯುವವರಲ್ಲಿ ಕಿಡ್ನಿಯಲ್ಲಿ ಉಪ್ಪಿನಂಶ ಉಂಟಾಗಿ ಅದು ಕಿಡ್ನಿಯಲ್ಲಿ ಕಲ್ಲುಗಳನ್ನೂ ಉಂಟುಮಾಡುತ್ತದೆ. ಇದು ಹೀಗೆ ಮುಂದುವರೆದರೆ ಇನ್ನಿತರ ಗಂಭೀರ ಆರೋಗ್ಯ ಸಮಸ್ಯೆಗಳೂ ಎದುರಾಗುತ್ತದೆ.
* ಹೆಚ್ಚು ನೀರು ಕುಡಿದರೆ ಏನಾಗುತ್ತದೆ?: ಹೆಚ್ಚು ನೀರನ್ನು ಕುಡಿದರೆ ಕಲ್ಮಶವೆಲ್ಲಾ ಹೋಗಿ ಕಿಡ್ನಿ ಆರೋಗ್ಯವಾಗಿರುತ್ತದೆ ಎಂಬ ನಂಬಿಕೆ ಕೆಲವರಲ್ಲಿದೆ. ಆದರೆ ಇದು ಪೂರ್ತಿ ಸತ್ಯವಲ್ಲ. ನೀರು ಕುಡಿಯುವುದರಿಂದ ಗ್ಲೊಮೆರುಲ್ ಫಿಲ್ಟರೇಶನ್ ಗೆ ಸಹಾಯ ಮಾಡುತ್ತದೆ. ಆದರೆ ಅತಿಯಾಗಿ ನೀರು ಕುಡಿಯುವುದರಿಂದ ಹೆಚ್ಚು ಒತ್ತಡ ಹಾಕಿದಂತಾಗಿ ಈ ಕಾರ್ಯವೂ ಬಲಹೀನಗೊಳ್ಳುತ್ತದೆ.
ಮೂತ್ರಪಿಂಡದ ಕಲ್ಲುಗಳು
ಮೂತ್ರಪಿಂಡದ ಕಲ್ಲುಗಳು
ಮೂತ್ರಪಿಂಡದಲ್ಲಿರುವ ಕಲ್ಲುಗಳೆಂದರೆ ಪುಟಾಣಿ ಹರಳುಗಳನ್ನು ಹೊಂದಿರುವ ಘನೀಕೃತ ಮೊತ್ತ. ಮೂತ್ರಪಿಂಡದಲ್ಲಿ ಏಕಕಾಲಕ್ಕೆ ಒಂದು ಅದಕ್ಕಿಂತ ಹೆಚ್ಚು ಕಲ್ಲುಗಳಿರಬಹುದು.
ಇತರೆ ಹೆಸರುಗಳು:- ರೀನಲ್ ಕ್ಯಾಕ್ಯಲಿ; ನೆಫ್ರೋಲಿಟೈಸಿಸ್,
ಕಾರಣಗಳು:
ಕ್ಯಾಲ್ಸಿಯಂ ಕಲ್ಲುಗಳು ಬಹು ಸಾಮಾನ್ಯ. ಮಹಿಳೆಯರಿಗಿಂತ ಪುರುಷರಲ್ಲಿ, ಅದೂ 20-30 ವಯೋಮಾನದವರಲ್ಲಿ ಇದು ಎರಡು ಅಥವಾ ಮೂರು ಪಟ್ಟು ಹೆಚ್ಚು ಸಾಮಾನ್ಯ. ಪುನರಾವೃತ್ತಿಯ ಸಾಧ್ಯತೆ ಹೆಚ್ಚು. ಕ್ಯಾಲ್ಸಿಯಂ ಇದರ ಅಂಶಗಳು ಅಂದರೆ, ಆಕ್ಸಲೇಟ್, ಫಾಸ್ಫೇಟ್, ಕಾರ್ಬೋನೇಟುಗಳಾಗಿ ರೂಪುಗೊಂಡು ಹರಳುಗಳಾಗುತ್ತವೆ. ಹಲವು ಆಹಾರ ಪದಾರ್ಥಗಳಲ್ಲಿ ಆಕ್ಸಲೇಟ್ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಸಣ್ಣ ಕರುಳಿಗೆ ಸಂಬಂಧಿಸಿದ ರೋಗಗಳಿದ್ದಲ್ಲಿ, ಅದರಿಂದ ಕ್ಯಾಲ್ಸಿಯಂ ಆಕ್ಸಲೇಟ್ ಹರಳುಗಳು ರೂಪುಗೊಳ್ಳುವ ಸಾಧ್ಯತೆ ಜಾಸ್ತಿ.
ಪುರುಷರಲ್ಲಿ ಯೂರಿಕ್ ಆಸಿಡ್ ಕಲ್ಲುಗಳೂ ಸಾಮಾನ್ಯ. ಕೆಮೋಥೆರಪಿಯೊಂದಿಗೆ ಅವು ತಳಕು ಹಾಕಿಕೊಂಡಿವೆ. ಯೂರಿಕ್ ಆಸಿಡ್ ಕಲ್ಲುಗಳೇ ಅತಿ ಹೆಚ್ಚಿನ ಪ್ರಮಾಣದಲ್ಲಿ ಕಾಣಸಿಗುತ್ತವೆ.
ಸಿಸ್ನ್ಯೂರಿಯಾ ಸಮಸ್ಯೆಯಿಂದ ನರಳುವವರಲ್ಲಿ ಸಿಸ್ಟೈನ್ ಕಲ್ಲುಗಳು ಸಾಮಾನ್ಯ. ಪುರುಷ ಹಾಗೂ ಮಹಿಳೆಯರಿಬ್ಬರಲ್ಲಿ ಕಾಣಸಿಗುವ ಈ ಸಮಸ್ಯೆ ಮೂಲತಃ ವಂಶಪಾರಂಪರ್ಯವಾಗಿ ಕಾಣಿಸಿಕೊಳ್ಳುತ್ತದೆ.
ಮೂತ್ರಕೋಶ ಅಂಗವ್ಯೂಹದಲ್ಲಿನ ಸೋಂಕಿನ ಪರಿಣಾಮವಾಗಿ ಕಾಣಿಸಿಕೊಳ್ಳುವುದು ಸ್ಟ್ರುವೈಟ್ ಕಲ್ಲುಗಳು ಮಹಿಳೆಯರಿಗೆ ಮಾತ್ರ. ಮೂತ್ರ ಪಿಂಡ, ಮೂತ್ರ ಕೋಶ ಹಾಗೂ ಮೂತ್ರನಾಳಕ್ಕೆ ಅಡ್ಡಿಯುಂಟು ಮಾಡುವಷ್ಟು ದೊಡ್ಡದಾಗಬಹುದು.
ಇತರ ಪದಾರ್ಥಗಳು ಹರಳುಗಟ್ಟಿ, ಘನರೂಪ ತಾಳಿ, ಕಲ್ಲುಗಳಾಗಿ ರೂಪಗೊಳ್ಳಬಹುದು.
ಲಕ್ಷಣಗಳು:
ಕಿಬ್ಬೊಟ್ಟೆಯಲ್ಲಿ ಅಳ್ಳೆಯಲ್ಲಿ ನೋವು ಅಥವಾ ಬೆನ್ನು ನೋವು
ನೋವು ಕ್ರಮೇಣ ಹೆಚ್ಚುತ್ತದೆ
ಹೆಚ್ಚು ತೀವ್ರ ಹೊಟ್ಟೆ ನೋವು
ಕಿಬ್ಬೊಟ್ಟೆಗೆ, ಸೊಂಟದಲ್ಲಿ, ಗುಪ್ತಾಂಗಗಳಿಂದ ಹೊರ ಸೂಸುವ ನೋವು
ತಲೆ ಸುತ್ತುವಿಕೆ, ವಾಂತಿ
ಪದೇ ಪದೇ ಮೂತ್ರ ವಿಸರ್ಜನೆ, ತುರ್ತು ವಿಸರ್ಜನೆ ಅಥವಾ ವಿಸರ್ಜಿಸುವ ಒತ್ತಡ
ಮೂತ್ರದಲ್ಲಿ ರಕ್ತ
ಹೊಟ್ಟೆ ನೋವು
ಮೂತ್ರ ವಿಸರ್ಜಿಸುವಾಗ ನೋವು
ರಾತ್ರಿ ಸಮಯದಲ್ಲಿ ಹೆಚ್ಚಿದ ಮೂತ್ರ ವಿಸರ್ಜನೆ
ಮೂತ್ರ ಮಾಡಲು ಹಿಂಜರಿಕೆ
ವೃಷಣಗಳಲ್ಲಿ ನೋವು
ಗೆಜ್ಜೆಯಲ್ಲಿ ನೋವು
ಜ್ವರ
ನಡುಕ
ಅಸಹಜವಾದ ಮೂತ್ರದ ಬಣ್ಣ.
ತಪಾಸಣೆ ಹಾಗೂ ಪರೀಕ್ಷೆಗಳು:
ಮಾದಕ ವಸ್ತುಗಳನ್ನು ಬಳಸುವಷ್ಟು ತೀವ್ರ ನೋವು. ಹೊಟ್ಟೆ ಅಥವಾ ಬೆನ್ನು ಸ್ಪರ್ಶಿಸಿದಾಗ ತೀರಾ ಮೃದು. ಕಲ್ಲುಗಳು ದೊಡ್ಡದಾಗಿದ್ದಷ್ಟು, ಪದೇ ಪದೇ ಕಾಣಿಸಿಕೊಂಡರೆ ಅದು ಮೂತ್ರಪಿಂಡ ವೈಫಲ್ಯದ ಸಂಕೇತ.
ಒತ್ತಡ ಪೂರ್ವಕವಾಗಿ ವಿಸರ್ಜಿಸಿದಾಗ, ಮೂತ್ರ ನಾಳದಲ್ಲಿ ಕಲ್ಲುಗಳು ಬರಬಹುದು.
ಈ ಕಲ್ಲುಗಳನ್ನು ಅವಲೋಕಿಸಿದಾಗ, ಕಲ್ಲಿನ ವಿಧ ಪತ್ತೆಯಾಗುತ್ತದೆ.
ಮೂತ್ರದ ತಪಾಸಣೆಯಿಂದ ಕಲ್ಲುಗಳು ಹಾಗೂ ಕೆಂಪು ರಕ್ತದ ಕಣಗಳನ್ನು ಪತ್ತೆ ಹಚ್ಚಬಹುದು.
ಯೂರಿಕ್ ಆಸಿಡ್ ಪ್ರಮಾಣ ಹೆಚ್ಚಿರುತ್ತದೆ.
ಮೂತ್ರಪಿಂಡದಲ್ಲಿನ ಕಲ್ಲುಗಳನ್ನು ಈ ಕೆಳಕಂಡ ವಿಧಾನದಿಂದ ಪತ್ತೆ ಹಚ್ಚಬಹುದು:
ಮೂತ್ರಪಿಂಡದ ಅಲ್ಪ್ಟಾ ಸೌಂಡ್
ಐವಿಪಿ (ಇಂಟ್ರಾವೀನಸ್ ಪೈಲೋಗ್ರಾಮ್)
ಹೊಟ್ಟೆಯ ಕ್ಷ-ಕಿರಣಗಳು
ಸಂಪ್ರದಾಯಿಕ ಪೈಲೋಗ್ರಾಮ್
ಹೊಟ್ಟೆಯ ಸಿಟಿ ಸ್ಕ್ಯಾನ್
ಹೊಟ್ಟೆಯ/ ಮೂತ್ರಪಿಂಡದ MRI
ಈ ತಪಾಸಣೆಗಳು ರಕ್ತ ಅಥವಾ ಮೂತ್ರದಲ್ಲಿ ಹೆಚ್ಚಿನ ಪ್ರಮಾಣದ ಕ್ಯಾಲ್ಸಿಯಂ ಇರಬಹುದು.
ಮೂತ್ರನಾಳದ ಸೋಂಕು
ಮೂತ್ರನಾಳದಲ್ಲಿ ಅಡಚಣೆ,
ಮೂತ್ರಪಿಂಡಗಳಿಗೆ ಹಾನಿ,
ಹಾನಿಗೊಂಡ ಮೂತ್ರದ ಕಾರ್ಯ ಕ್ಷಮತೆ ತಗ್ಗಬಹುದು ಅಥವಾ ಸಂಪೂರ್ಣ ನಿಲ್ಲಬಹುದು.
ತಡೆಯುವುದು
ಮೂತ್ರಪಿಂಡ ಕಲ್ಲುಗಳಿದ್ದವರು, ಹೆಚ್ಚೆಚ್ಚು ನೀರು ಕುಡಿಯಬೇಕು. ಇದರಿಂದ, ಮೂತ್ರದ ಸಾರ ಕಡಿಮೆಯಾಗುತ್ತದೆ. ದಿನಕ್ಕೆ 6-8 ಗ್ಲಾಸು ನೀರನ್ನು ಕುಡಿಯಬೇಕು. ಮೂತ್ರದಲ್ಲಿರುವ ಕಲ್ಲಿನ ವಿಧವನ್ನು ಗುರುತಿಸಿ, ಚಿಕಿತ್ಸಾ ಕ್ರಮವನ್ನು ರೂಪಿಸಬೇಕು.
ಮೂತ್ರಪಿಂಡಗಳು
ಮೂತ್ರಪಿಂಡಗಳು
ಮಾನವ ಶರೀರದ ಅತ್ಯಾವಶ್ಯಕ ಅಂಗಗಳಲ್ಲಿ ಮೂತ್ರಪಿಂಡಗಳೂ ಮುಖ್ಯ. ಇವು ಎರಡಿವೆ. ಇವು ಉದರದ ಹಿಂಭಾಗದ ಗೋಡೆಯಲ್ಲಿ, ಬೆನ್ನೆಲುಬಿನ ಎರಡೂ ಪಕ್ಕಗಳಲ್ಲಿ ಸ್ಥಾಪಿತವಾಗಿವೆ. ಒಂದೊಂದೂ ಸುಮಾರು 250 ಗ್ರಾಂ ತೂಗುತ್ತವೆ ಮತ್ತು 10ರಿಂದ 12 ಸೆಂ.ಮೀ. ಉದ್ದದ, ಹುರಳೀ ಬೀಜದ ಆಕಾರದಲ್ಲಿದೆ.
ಮೂತ್ರಪಿಂಡ ಕ್ರಿಯೆಗಳು:
ಮೊದಲನೆಯದು-ರಕ್ತದಲ್ಲಿನ ಕಲ್ಮಶಗಳನ್ನು ಶೋಧಿಸಿ, ಮೂತ್ರದ ರೂಪದಲ್ಲಿ ಹೊರಕಾಕಿ, ಶುದ್ಧ ರಕ್ತವನ್ನು ಶರೀರಕ್ಕೆ ಹಿಂದಿರುಗಿಸುವುದು.
ಎರಡನೆಯದು- ಶರೀರಾವಶ್ಯಕವಾದ ನೀರು ಮತ್ತು ಖನಿಜಗಳನ್ನು ಆರೋಗ್ಯ ರಕ್ಷಣೆಗೆ ತಕ್ಕಷ್ಟು ಉಳಿಸುವ ನಿಯಂತ್ರಣ ಮೂರನೆಯದು- ಶರೀರದ ಇತರ ಕ್ರಿಯೆಗಳನ್ನು ನಿಯಂತ್ರಿಸುವ ಚೋದಕ ಗಳನ್ನು ಉತ್ಪಾದಿಸುವುದು. ಹೀಗೆ ದೇಹದ ಅನೇಕ ಅಂಗ, ಅಂಗಾಂಶಗಳು ತಮ್ಮ ಕ್ಲಪ್ತ ಕ್ರಿಯೆಗಳಿಗೆ,
ಮೂತ್ರಪಿಂಡಗಳ ಸುಸ್ಥಿತಿಯನ್ನಪೇಕ್ಷಿಸು ತ್ತದೆ. ಯಾವಾಗ ಮೂತ್ರಪಿಂಡಗಳ ಕ್ರಿಯೆ ರೋಗಗಳಿಂದ ಸರಿಯಾಗಿ ನಡೆಯುವು ದಿಲ್ಲವೋ, ಅಥವಾ ಪೂರ್ಣ ವಿಫಲ ಗೊಳ್ಳುವವೋ ಆಗ ಮೂತ್ರಪಿಂಡಗಳ ‘ಬದಲು ಚಿಕಿತ್ಸೆ’ ಅಂದರೆ ಯಾಂತ್ರಿಕ ಮೂತ್ರಪಿಂಡ ಚಿಕಿತ್ಸೆ ಅಥವಾ ಬದಲೀ ಮೂತ್ರಪಿಂಡ ಕಸಿ ಚಿಕಿತ್ಸೆ ಅಗತ್ಯ ಬೀಳುತ್ತದೆ.
ಮೂತ್ರಪಿಂಡಗಳ (kidney ) ಸಾಮಾನ್ಯ ರೋಗಗಳು: -ಮೂತ್ರಪಿಂಡಗಳ ವೈಫಲ್ಯ (kidney failure)
- ಮೂತ್ರಪಿಂಡಗಳ ಸೋಂಕುಗಳು
-ಮೂತ್ರಪಿಂಡಗಳ ಕಲ್ಲುಗಳ ತೊಂದರೆ (kidney stone disease)
Subscribe to:
Posts (Atom)





